ಗ್ರೆಗೊರಿ, ಇಸೆಬಲ ಆಗಸ್ಟ

	1852 --- 1932. ಐರಿಷ್ ಲೇಖಕಿ ಮತ್ತು ನಾಟಕಗಾರ್ತಿ. ಐರ್ಲೆಂಡಿನ ಗಾಲ್ವೆ ಪ್ರಾಂತ್ಯದ ರಾಕ್ಸ್‍ಬರ್ಗಿನ ಶ್ರೀಮಂತ ಕುಟುಂಬವೊಂದರಲ್ಲಿ ಹುಟ್ಟಿದ ಈಕೆ 1880ರಲ್ಲಿ ಮಿಲಿಯಮ್ ಗ್ರೆಗೊರಿಯನ್ನು ಮದುವೆಯಾದಳು. ಮದುವೆಯಾದ ಹತ್ತು ವರ್ಷಗಳಲ್ಲಿ ಆತ ಗತಿಸಿದ. ಅನಂತರ ಆತನ ಆಸ್ತಿಯ ಮೇಲ್ವಿಚಾರಣೆ ಈಕೆಯದಾಯಿತು.  

	ಈಕೆ ಡಬ್ಲ್ಯು.ಬಿ.ಯೇಟ್ಸ್‍ನನ್ನು ಸಂಧಿಸಿದ್ದು (1898) ಒಂದು ಮಹತ್ತ್ವದ ಸಂಗತಿ . ಅದು ಐರಿಷ್ ಪುನರುತ್ಥಾನದ ಯುಗ; ರಾಷ್ಟ್ರೀಯತೆಯ ಕಾವು ಎಲ್ಲೆಲ್ಲೂ ಹಬ್ಬುತ್ತಿತ್ತು, ಜನರಲ್ಲಿ ತಮ್ಮ ದೇಶ, ಜೀವನ, ಸಾಹಿತ್ಯ, ಇತಿಹಾಸಗಳ ಮಮತೆ ಅಭಿಮಾನಗಳು ಉಕ್ಕುತ್ತಿದ್ದವು; ಇತರ ಕ್ಷೇತ್ರಗಳಲ್ಲಿ ಇದನ್ನು ವ್ಯಕ್ತಪಡಿಸಲೆತ್ನಿಸುತ್ತಿದ್ದಂತೆಯೇ ಅತ್ಯಂತ ಜನಪ್ರಿಯವಾಗಿದ್ದ ರಂಗ ಮಾಧ್ಯಮದ ಮೂಲಕವೂ ಪ್ರಚಾರ ಮಾಡಬೇಕೆಂಬುದರ ಅರಿವು ಪ್ರಗತಿಶೀಲರಿಗೆ ಉಂಟಾಯಿತು. ಐರಿಷ್ ರಾಷ್ಟ್ರೀಯ ನಾಟಕ ಸಂಘ ಲಂಡನಿನಲ್ಲಿ ಸ್ಥಾಪಿತವಾಯಿತು (1899). ಆದರೆ ಅದರ ಕಾರ್ಯಸ್ಥಾನ ಡಬ್ಲಿನಿನಲ್ಲಿತ್ತು. ಡಬ್ಲಿನ್ನಿನ ಅಬೆ ರಂಗಗೃಹವನ್ನು ಕೊಂಡು ಪುನರ್ರಚಿಸುವುದರಲ್ಲಿ, ಅದಕ್ಕೊಂದು ಆರ್ಥಿಕ ಭದ್ರತೆಯನ್ನು ಒದಗಿಸುವುದರಲ್ಲಿ, ಮತ್ತು ಅದರ ಕಾರ್ಯಕ್ರಮಗಳ ಲಕ್ಷ್ಯ ಸಾಧನೆಯಾಗುವಂತೆ ಯೋಜನೆಗಳನ್ನು ರೂಪಿಸುವುದರಲ್ಲಿ ಈಕೆಯ ಪಾತ್ರ ಹಿರಿದು. ಯೇಟ್ಸ್, ಜಾರ್ಜ್‍ಮೂರ್, ಎಡ್ವರ್ಡ್ ಮಾರ್ಟಿನ್, ಎ.ಇ.ಎಫ್. ಹಾರ್ನಿಮನ್ ಇವರುಗಳೊಂದಿಗೆ ತಾನೂ ಸೇರಿ, ಯೋಜನೆಯ ಯಶಸ್ಸಿಗೆ ಶಕ್ಯವಿದ್ದ ಎಲ್ಲ ರೀತಿಗಳಿಂದಲೂ ಈಕೆ ಸೇವೆ ಸಲ್ಲಿಸಿದಳು.   

	ವಿಶೇಷವಾಗಿ ಯೇಟ್ಸ್ ಮತ್ತು ಈಕೆಯ ಸ್ನೇಹ ಪರಸ್ಪರ ಪ್ರಯೋಜನಕಾರಿಯಾಯಿತು. ಯೇಟ್ಸ್‍ನ ಪ್ರದೀಪ್ತ ಮತಿಯ ಸಂಪರ್ಕದಿಂದಾಗಿ ಈಕೆಯಲ್ಲಿ ಹುದುಗಿದ್ದ ಪ್ರತಿಭೆ ಜಾಗೃತವಾಯಿತು. ತನಗೆ ಮುಂಚಿನಿಂದಲೂ ಆತ್ಮೀಯವಾಗಿ ಪರಿಚಯವಿದ್ದ ಐರ್ಲೆಂಡಿನ ಗ್ರಾಮೀಣ ಬದುಕು, ಭಾಷೆಗಳ ಸೊಬಗನ್ನು ಯೇಟ್ಸ್‍ಗೂ ಈಕೆ ತೋರಿಸಿ ಕೊಟ್ಟಳಲ್ಲದೆ ಅವನ್ನು ಹೇಗೆ ನಾಟಕ ರಚನೆಯಲ್ಲಿ ಉಪಯೋಗಿಸಿಕೊಳ್ಳಬೇಕೆಂಬುದರ ಬಗ್ಗೆ ಮಾರ್ಗದರ್ಶನ ಮಾಡಿದಳು. ಈಕೆ ಮೊದಮೊದಲು ಯೇಟ್ಸನ ಕೃತಿರಚನೆಯಲ್ಲಿ ಪಾಲುಗೊಳ್ಳುತ್ತಿದ್ದು ಕ್ರಮೇಣ ಸ್ವತಂತ್ರವಾಗಿ ಬರೆಯತೊಡಗಿದಳು.      

	ಐರಿಷ್ ಜನರ ಹಳ್ಳಿಯ ಜೀವನವನ್ನು ಚಿತ್ರಿಸುವ ಏಕಾಂಕಗಳು ಈಕೆಗೆ ಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಹಯಸಿಂತ್ ಹಾಲ್ವೇ, ದಿ ವರ್ಕ್‍ಹೌಸ್ ವಾರ್ಡ್ ಮತ್ತು ಸ್ಪ್ರೆಡಿಂಗ್ ದಿ ನ್ಯೂಸ್-ಇವು ಒಳ್ಳೆಯ ಕೃತಿಗಳು. ಸ್ವಪ್ರಯತ್ನವನ್ನೂ ಮೀರಿ ಕೀರ್ತಿವಂತನಾಗುವ ಒಬ್ಬನ ಬವಣೆಯ ವಿನೋದ ಚಿತ್ರಣ ಹಯಸಿಂತ್ ಹಾಲ್ವೇ. ವೈಯಕ್ತಿಕ ಛಲದ ಕಾರಣ ತಾನು ದುಡಿಮನೆಯಲ್ಲಿಯೇ ಇರುವುದಾಗಿ ಹಟ ತೊಡುವ ಒಬ್ಬನ ಚಿತ್ರ ದಿ ವರ್ಕ್ ಹೌಸ್ ವಾರ್ಡ್. ಇಲಿ ಹೋದದ್ದಕ್ಕೆ ಹುಲಿಯೇ ಹೋಯಿತೆಂಬಂತೆ ಸಾಮಾನ್ಯ ಘಟನೆಯೊಂದನ್ನು ಕರ್ಣಾಕರ್ಣಿಕೆಯಾಗಿ ಬೆಳೆಸಿ ಆಧಾರರಹಿತ ಕೊಲೆಯ ಅಪಾದನೆಯ ಮೇಲೆ ನಾಲ್ಕಾರು ಜನ ಸೆರೆಮನೆ ಸೇರಬಹುದೆನ್ನುವಂತಾಗುವ ಸಂದರ್ಭವೇ ಸ್ಪ್ರೆಡಿಂಗ್ ದಿ ನ್ಯೂಸ್.     

	ಗ್ರೀಕ್ ವೀರ ಪರ್ಸಿಯಸ್ ಮತ್ತು ಆ್ಯಂಡ್ರೋಮಿಡರ ಕಥೆಯನ್ನು ಜ್ಞಾಪಿಸುವ ದಿ ಡ್ರ್ಯಾಗನ್ ಕೃತಿ ಈಕೆಯ ಸಂವೃದ್ಧ ಕಲ್ಪನೆಗೆ ಒಂದು ಮಾದರಿ.  

	ಈಕೆಯ ಕೃತಿಗಳು ಐರ್ಲೆಂಡಿನ ಜನಜೀವನವನ್ನೂ ಅಲ್ಲಿಯ ಜನತೆಯ ವಿಶಿಷ್ಟವಾದ ಸ್ವಭಾವವನ್ನೂ ಸೂಕ್ಷ್ಮವಾಗಿ ಲಕ್ಷಿಸಿ ಬರೆದವು. ವಿನೋದ ಮತ್ತು ವಿಚಾರಶೀಲತೆಗಳ ಸಮ್ಮಿಲನ, ಹಾಸ್ಯರಸ ಮತ್ತು ಕರುಣರಸಗಳ ಸಮತೋಲನೆ, ಯಶಸ್ವೀ ಕಥಾವಸ್ತು, ಉತ್ತಮ ಸಂಭಾಷಣೆ - ಇವುಗಳಿಂದಾಗಿ ಈಕೆಯ ಪ್ರತಿಯೊಂದು ನಾಟಕವೂ ರಂಗಭೂಮಿಯ ಮೇಲೆ ಪರಿಣಾಮಕಾರಿ ಪ್ರಯೋಗ ಎನಿಸಿದೆ.  

	ಈಕೆ ಫ್ರೆಂಚ್ ನಾಟಕಕಾರ ಮೊಲಿಯೆರನ ಹರ್ಷನಾಟಕಗಳನ್ನು ಐರಿಷ್ ಉಪಭಾಷೆಗೆ ಭಾಷಾಂತರಿಸಿದ್ದಾಳೆ. ಐರ್ಲೆಂಡಿನ ರೂಪಕ ಸಾಹಿತ್ಯ ಚರಿತ್ರೆಯನ್ನು ಅವರ್ ಐರಿಷ್ ಥಿಯೇಟರ್ ಎಂಬ ಹೆಸರಿನಲ್ಲಿ ಬರೆದಿದ್ದಾಳೆ. ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ತನ್ನ ದಿನಚರಿಯನ್ನು ಈಕೆ ಕಲೆಹಾಕಿ ಪ್ರಕಟಿಸಲೋಸುಗ ಪುನರ್ ವಿಂಗಡಿಸಿದಳು (1916). ಅವು ಬೆರಳಚ್ಚಿನಲ್ಲಿ 42 ಸಂಪುಟಗಳಷ್ಟಿದ್ದುವು. 1946ರಲ್ಲಿ ಲೆನೋಕ್ಸ್ ರಾಬಿನ್‍ಸನ್ ಎಂಬಾತ ಅವನ್ನು ಸಂಪಾದಿಸಿ ಲೇಡಿ ಗ್ರೆಗರೀಸ್ ಜರ್ನಲ್ಸ್ 1916 -- 1930 ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾನೆ. ಈ ಕೃತಿ ಆ ಕಾಲದ ಐರಿಷ್ ಸಾಹಿತ್ಯದ ಬಗ್ಗೆ ತಿಳಿಯುವವರಿಗೆ ಆಧಾರ ಗ್ರಂಥವಾಗಿದೆಯೆಂದು ತಜ್ಞರ ಅಭಿಪ್ರಾಯ.          				       (ಆರ್.ಎನ್.ಎ.ಜಿ.; ಪಿ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ